ವಿಕ್ರಮಾದಿತ್ಯ 1

	ಬಾದಾಮಿ ಚಳುಕ್ಯ ಅರಸುಮನೆತನದ ಶೂರ ದೊರೆ (ಸು.655-81), ಎರಡನೆಯ ಪುಲಕೇಶಿಯ ಐವರು ಮಕ್ಕಳಲ್ಲಿ ಒಬ್ಬ. ಇವನಿಗೆ ರಣರಸಿಕ, ಪರಮಮಾಹೇಶ್ವರ, ಅನಿವಾರಿತ, ರಾಜಮಲ್ಲ, ಶ್ರೀವಲ್ಲಭ ಇತ್ಯಾದಿ ಬಿರುದುಗಳಿದ್ದುವು. 

	ಸು.642ರಲ್ಲಿ ಪಲ್ಲವ ನರಸಿಂಹವರ್ಮ ಬಾದಾಮಿಯ ಮೇಲೆ ದಾಳಿಮಾಡಿ ಆಕ್ರಮಿಸಿದ್ದ. ಇದರಿಂದ ನಷ್ಟವಾಗಿದ್ದ ಚಳುಕ್ಯ ರಾಜ್ಯಶ್ರೀಯನ್ನು ಮರಳಿಪಡೆಯುವುದು ವಿಕ್ರಮಾದಿತ್ಯನ ಮೊದಲ ಕೆಲಸವಾಯಿತು. ಅವನಿಪತಿ ತ್ರಿತಯಾಂತರಿತವಾಗಿದ್ದ ಚಳುಕ್ಯ ಸಾಮ್ರಾಜ್ಯವನ್ನು ಈತ ಸ್ವಶ್ರಮದಿಂದ ಬಿಡಿಸಿಕೊಂಡುದಾಗಿ ಶಾಸನಗಳು ತಿಳಿಸುತ್ತವೆ. ಈ ಮೂವರು ಅವನಿಪತಿಗಳು ಪಲ್ಲವ ಸಾಮಂತರಾದ ಚೋಳ, ಪಾಂಡ್ಯ, ಕೇರಳ ಅರಸರಿರಬೇಕೆಂಬ ಊಹೆ ಇದೆಯಾದರೂ ಈ ವಿಷಯ ಸ್ಪಷ್ಟವಾಗಿಲ್ಲ. ಗಂಗ ದುರ್ವಿನೀತ ಕಾಡುವೆಟ್ಟಿಯನ್ನು (ಪಲ್ಲವರಾಜ) ಸೆರೆಹಿಡಿದು ಮೊಮ್ಮಗ ಜಯಸಿಂಹ ವಲ್ಲಭನಿಗೆ ಚಳುಕ್ಯ ಸಿಂಹಾಸವನ್ನು ದೊರಕಿಸಿದನೆಂದು ಒಂದು ಶಾಸನದ ಹೇಳಿಕೆ. ಆದರೆ ಈ ವಿಷಯದಲ್ಲೂ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಏನೇ ಆದರೂ ಪಲ್ಲವರಿಂದ ತನ್ನ ಸಾಮ್ರಾಜ್ಯವನ್ನು ಸಾಧಿಸಿಕೊಳ್ಳಲು ವಿಕ್ರಮಾದಿತ್ಯ ಹಲವು ವರ್ಷಗಳ ಕಾಲ ಶ್ರಮಿಸಿರಬೇಕು. ಆದರೆ 655ರ ಹೊತ್ತಿಗೆ ಈತ ಚಳುಕ್ಯ ಸಾಮ್ರಾಜ್ಯಾಧಿಕಾರವನ್ನು ನಿರ್ವಹಿಸುತ್ತಿದ್ದನೆಂಬುದು ಸ್ಪಷ್ಟವಾಗಿ ತಿಳಿದಿದೆ.

	ಚಾಳುಕ್ಯ ಸಾಮ್ರಾಜ್ಯದ ಪುನಃಸ್ಥಾಪನೆಯ ಅನಂತರ ಆ ವಂಶಕ್ಕೆ ಅಂಟಿದ್ದ ಕಳಂಕವನ್ನು ತೊಡೆಯುವುದು ಇವನ ಮುಖ್ಯ ಕೆಲಸವಾಯಿತು. ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ. ಪಲ್ಲವ ನರಸಿಂಹ ವರ್ಮ, ಅವನ ಮಗ ಇಮ್ಮಡಿ ಮಹೇಂದ್ರವರ್ಮ, ಅವನ ಮಗ ಒಂದನೆಯ ಪರಮೇಶ್ವರವರ್ಮ ಈ ಮೂವರು ರಾಜರ ಕಾಲದಲ್ಲಿ ಅವರ ರಾಜ್ಯದ ಮೇಲೆ ದಾಳಿಮಾಡಿದ. 670ರ ಸುಮಾರಿನಲ್ಲಿ ಕಂಚಿಯನ್ನು ಆಕ್ರಮಿಸುವ ಉದ್ದೇಶದಿಂದ, ಆ ನಗರದ ಸಮೀಪದ ಮಲ್ಲಿಯೂರಿನ ವರೆಗೂ ನಡೆದಿದ್ದ.  674ರಲ್ಲಿ  ಚೋಳ  ವಶದಲ್ಲಿದ್ದ ತಿರುಚ್ಚಿರಾಪ್ಪಳ್ಳಿ ಬಳಿಯ ಉರಗಪುರದಲ್ಲಿ (ಉರೈಯೂರ್) ಬೀಡುಬಿಟ್ಟಿದ್ದ. ಪಲ್ಲವ ಶಾಸನಗಳಲ್ಲಿ ಪಲ್ಲವರು ವಿಕ್ರಮಾದಿತ್ಯನನ್ನು ಹಲವೆಡೆ ಸೋಲಿಸಿದರೆಂಬ ಉಲ್ಲೇಖಗಳು ದೊರಕುತ್ತವೆಯಾದರೂ ಈ ಎಲ್ಲ ಯುದ್ಧಗಳೂ ತಮಿಳು ನಾಡಿನ ಭಾಗಗಳಲ್ಲೇ ನಡೆದವಾದ್ದರಿಂದ ವಿಕ್ರಮಾದಿತ್ಯ ಪಲ್ಲವರನ್ನು ಬಗ್ಗುಬಡಿಯಲು ಪ್ರಯತ್ನಿಸುತ್ತ ಆ ರಾಜ್ಯದ ಎಲ್ಲೆಗಳೊಳಗೇ ಘರ್ಷಣೆಗಳು ಸೀಮಿತವಾಗುವಷ್ಟು ಶಕ್ತಿಶಾಲಿಯಾಗಿದ್ದ ನೆಂದು ತಿಳಿಯಬಹುದಾಗಿದೆ. 

	ವಿಕ್ರಮಾದಿತ್ಯ ನಿರ್ವಹಿಸಿದ ಈ ಅನೇಕ ಯುದ್ಧಗಳಲ್ಲಿ ಇವನ ಮಗ ವಿನಯಾದಿತ್ಯ ಮತ್ತು ಮೊಮ್ಮಗ ವಿಜಯಾದಿತ್ಯ ಸಹ ಪಾಲ್ಗೊಳ್ಳುತ್ತಿದ್ದರೆಂದು ಶಾಸನಗಳಿಂದ ತಿಳಿಯುತ್ತವೆ. ಹಲವು ಸಮಯಗಳಲ್ಲಿ ವಿಕ್ರಮಾದಿತ್ಯ ಯುದ್ಧಾರ್ಥವಾಗಿ ರಾಜಧಾನಿಯಿಂದ ಹೊರಗಿರುತ್ತಿದ್ದಾಗ ರಾಜ್ಯದ ರಕ್ಷಣೆಯ ಹೊಣೆಯನ್ನು ಮಗ ಮತ್ತು ಮೊಮ್ಮಗ ಹೊತ್ತಿರುತ್ತಿದ್ದರು. ಚಳುಕ್ಯ ರಾಜ್ಯಶ್ರೀಯನ್ನು ಕೀರ್ತಿಪೀಠದ ಮೇಲೆ ನಿಲ್ಲಿಸಿದ ವಿಕ್ರಮಾದಿತ್ಯ ಸು.26 ವರ್ಷಗಳ ಕಾಲ ರಾಜ್ಯವಾಳಿ 681ರಲ್ಲಿ ಮೃತನಾದ. ಅನಂತರ ಇವನ ಮಗ ವಿನಯಾದಿತ್ಯ ಪಟ್ಟವೇರಿದ.    			
				(ಟಿ.ಎಸ್.ಆರ್.ಜಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ